Saturday, April 2, 2016

Holi in Kaliyuva mane


   ಕಲಿಯುವ ಮನೆಯಲ್ಲಿ ಹೋಳಿ ಆಚರಣೆ

ಬಣ್ಣ ಬಣ್ಣಗಳ ಚಿತ್ತಾರ,
ಮುಗ್ಧ ಮನಗಳಲಿ ಬಿತ್ತರ,

ಯವ ಚೇತನಗಳ ಮಮಕಾರ,
ಪ್ರೀತಿ ಪ್ರೇಮದ ವಿಸ್ತಾರ....

ಇದೇ ದಿವ್ಯದೀಪದ ಆಗರ....
ಇದೇ ಭಗವಂತನ ಹುನ್ನಾರ...!

          ಬಣ್ಣಗಳಿಗೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಬಣ್ಣ ವೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ??  ಈ ಜಗತ್ತೆ ಒಂದು ಬಣ್ಣದ ಲೋಕ. ನೀಲಾಕಾಶ, ಹಸಿರು ಕಾನನ, ಶ್ವೇತ ಪರ್ವತ, ಕೆಂಪು ಗುಲಾಬಿ, ಕಿತ್ತಲೆ ಸೂರ್ಯ, ಹಳದಿ ಸೂರ್ಯಕಾಂತಿ, ಹೀಗೆ ಎಲ್ಲವೂ ವರ್ಣಮಯವಾಗಿಯೇ  ಇದೆ.
ಹೂವುಗಳು ಆ ಬಣ್ಣಗಳ ವಾರಸುದಾರರಂತೆ.....   ಬಣ್ಣಗಳ ಬಟ್ಟೆ ಧರಿಸಿ , ಸುವಾಸನೆಯ ಸೂಸುತ್ತ ದುಂಬಿಯನು ಆಕರ್ಷಿಸುವ ಹೂವಿನ ಸೌಂದರ್ಯವನ್ನ ಬಣ್ಣಿಸಲಾಗದು.....  ಅದರಂತೆಯೆ  ತಮ್ಮ ಮುಗ್ದ ಮನಸ್ಸಿನ ಮೂಲಕ ತುಂಟ ಸ್ವಭಾವದಿ, ಶುದ್ಧ ಹೃದಯದಿಂದ ನಮ್ಮನ್ನು ಆಕರ್ಷಿಸುವ ಮಕ್ಕಳು ಹೂವುಗಳಂತೆಯೆ..... 
        ಆ ಹೂವುಗಳಲ್ಲಿ ಬಣ್ಣ ತುಂಬುವುದು ನಮ್ಮ ಪ್ರಕೃತಿ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದಂತೆ......

        ಸಪ್ತವರ್ಣಗಳಲ್ಲಿ ಸುಪ್ತವಾಗಿರುವ ಗುಪ್ತಭಾವನೆಗಳ ಹೊರಹಾಕುವ, ಬಣ್ಣ ಬಣ್ಣದಲಿ ದೇಹವು ಮಿಂದು ಮೆರೆಯುವ ಹಬ್ಬ  ಕಾಮದಹನದ ಹಬ್ಬ.... ಭಾರತೀಯರ ಬಣ್ಣದ ಹಬ್ಬ.... ಅದೇ ಹೋಳಿ.....
ದೇಶದಾದ್ಯಂತ ಆ ದಿನವನ್ನು ಒಬ್ಬರಿಗೆ ಒಬ್ಬರು ಬಣ್ಣ ಹಚ್ಚುತ್ತ, ಬಣ್ಣದ ನೀರೆರೆಚುತ್ತ,  ಸಂತೋಷದಿಂದ ಆಚರಿಸುತ್ತಾರೆ...... 
     
        ಹೀಗಿರುವಾಗ ದಿವ್ಯದೀಪ ಚಾರಿಟೆಬಲ್ ಟ್ರಸ್ಟ್ ನಡೆಸುತ್ತಿರುವ ಸುಮಾರು ೧೨೦ ಮಕ್ಕಳಿಗೆ ಉಚಿತವಾಗಿ, ಉತ್ತಮ ರೀತಿಯ ಶಿಕ್ಷಣವನ್ನು ನೀಡುತ್ತಿರುವ ಪ್ರಾಯೋಗಿಕ ಶಾಲೆಯಾದ ನಮ್ಮ ಕಲಿಯುವ ಮನೆಯ ಮಕ್ಕಳು ಮಾತ್ರ ಸುಮ್ಮನೆ ಇರಬೇಕೆ?
    ಅಲ್ಲೂ ಸಹ ಹೋಳಿಯನ್ನು ಆನಂದದಿಂದ ಆಚರಿಸಲಾಯಿತು....


                                 

         ಶುಕ್ರವಾರ, ಮಧ್ಯಾಹ್ನ. ೧೨ ಗಂಟೆ. ರಕ್ಷಿತ್ ಮತ್ತು ಇನ್ನು ಹಲವರು ಕಲಿಯುವ ಮನೆಗೆ ಬಂದರು. ಅಂದು ಹೋಳಿ ಹಬ್ಬವನ್ನು ಆಚರಿಸುವ ಸಲುವಾಗಿ ಅಲ್ಲಿಗೆ ಬಂದಿದ್ದರು.  
ತರಗತಿಗಳು ಇನ್ನು ನಡೆಯುತ್ತಿದ್ದವು.  ಹೋಳಿಯಾಡಲು ಎಲ್ಲಾ ಸ್ವಯಂಸೇವಕರಿಗೂ ಹೇಳಿದ್ದ ಸಮಯ ೨ ಗಂಟೆ. ಅದಕ್ಕೆ ಇನ್ನು  ಕೆಲ ಸಮಯವಿತ್ತು. ಪೂರ್ವ ತಯಾರಿಗೆಂದು ಇವರೆಲ್ಲರು ಬಂದಿದ್ದರು.
            ಎರಡು ಡ್ರಂಗಳನ್ನು ತೆಗೆದುಕೊಂಡು ಅದರ ತುಂಬ ನೀರನ್ನು ತುಂಬಿಸಿದರು. ತಾವು ತಂದಿದ್ದ ಬಣ್ಣವನ್ನು ಅದರಲ್ಲಿ ಹಾಕಿದರು.  ನಂತರ ಬಂದ ಎಲ್ಲರೂ  ಬಣ್ಣಗಳನ್ನು ಆ ನೀರಿಗೆ ಹಾಕಿ ಅದನ್ನು ಬಣ್ಣದ ನೀರನ್ನಾಗಿ ಮಾಡಿದರು. ಇನ್ನು ಅದನ್ನು ಎರಚಾಡುವುದೊಂದೇ  ಬಾಕಿ. 
           ಕಲಿಯುವ ಮನೆಯ ಬಸ್ಸನ್ನು  ಸ್ವಯಂಸೇವಕರನ್ನು ಕರೆತರಲು ಎನ್ ಐ ಇ ಕಾಲೇಜಿಗೆ ಕಳುಹಿಸಲಾಯಿತು.   ಬಸ್ ಅಲ್ಲಿಗೆ ತಲುಪಿದಾಗ ೨:೧೫. ಆಗಲೇ ಅಲ್ಲಿ ಹತ್ತರಿಂದ ಹದಿನೈದು ಜನ ಸೇರಿದ್ದರು. ಇಂದ್ರೇಶ್ ,ಬಿಂದು, ವೈಭವ್ ಶಿವಶರಣ್ ಮುಂತಾದವರೆಲ್ಲರೂ ಅಲ್ಲಿ ಇದ್ದರು. ಬಸ್ ಬಂದೊಡನೆಯೆ ಎಲ್ಲರು ಬಸ್ಸನ್ನು  ಏರಿದರು. ಅವರ ಹತ್ತಿರವು  ನಾಲ್ಕು ರೀತಿಯ  ಬಣ್ಣಗಳಿದ್ದವು ತಲಾ ಒಂದೊಂದು ಕೆಜಿಯವು. ಎಲ್ಲರೂ ಸಹ ಬಣ್ಣಗಳಲ್ಲಿ ಮೀಯಲು  ಕಾತರರಾಗಿದ್ದರು. ಕೆಲವರು ಅದಕ್ಕೆ ತಕ್ಕಂತೆ ಬಟ್ಟೆ ಯನ್ನು ಹಾಕಿಕೊಂಡು ಎಲ್ಲಾ ರೀತಿಯಲ್ಲು ತಯಾರಾಗಿದ್ದರು.  

                 ಬಸ್ ಮತ್ತೆ ಕಲಿಯುವ ಮನೆಗೆ ಬಂದಾಗ ೨:೪೦.  ನೋಡುತ್ತಿದ್ದಂತೆ ಎಲ್ಲರಿಗೂ ಆಶ್ಚರ್ಯ. ಅಲ್ಲಿ ಆಗಲೇ ಎಲ್ಲರೂ  ಹೋಳಿ ಆಡಲು ಶುರು ಮಾಡಿದ್ದರು. ಮಕ್ಕಳಂತೂ  ಎಲ್ಲ ಕಡೆಯೂ  ಓಡಾಡುತ್ತ ಕೂಗುತ್ತ, ಸಂತಸದಿಂದ ನೀರನ್ನು ಒಬ್ಬರ ಮೇಲೊಬ್ಬರು ಎರೆಚುತ್ತ, ಬಣ್ಣದಲ್ಲಿ ಸ್ನಾನ ಮಾಡಿದವರಂತಿದ್ದರು. 

                ಬಸ್ ಬಂದು ನಿಂತದ್ದೆ ತಡ..... ಎಲ್ಲಾ ಮಕ್ಕಳು ಬಸ್ಸನ್ನು ಸುತ್ತುವರಿದರು. ಬಾಗಿಲನ್ನು ತೆಗೆದು ಇಳಿಯುತ್ತಿದ್ದಂತೆ ಬಣ್ಣ ಹಾಕಲು ಸ್ವಲ್ಪ ಮಕ್ಕಳು ಸಿದ್ಧರಿದ್ದರೆ, ಬಣ್ಣದ ನೀರನ್ನು ತಲೆಯ ಮೇಲೆ ಸುರಿಯಲು ಇನ್ನು ಕೆಲವರು ತಯಾರಿದ್ದರು. ಬಸ್ಸಿನಲ್ಲಿದ್ದವರಿಗಂತು ಅದು ಅದ್ಭುತ ಸ್ವಾಗತದಂತಿತ್ತು.  ಬಾಗಿಲನ್ನು ತೆಗೆಯಲು ಸಹ ಬಿಡುತ್ತಿಲ್ಲ. ಅವರ ಬಣ್ಣ ಹಾಕುವ ಆತುರ ನೋಡಿದರೆ ಬಸ್ಸಿನೊಳಕ್ಕೆ ಬಂದು ಹಾಕುವಂತಿದ್ದರು. ಅಷ್ಟು ಜೋಷ್ ಅಲ್ಲಿ  ಆ ಮಕ್ಕಳನ್ನು ನೋಡಲು ಬಹಳ ಸಂತಸವಾಗುತ್ತಿತ್ತು.  
ಒಬ್ಬೊಬ್ಬರಾಗಿ ಬಸ್ಸಿನಿಂದ ಕೆಳಗಿಳಿಯ ತೊಡಗಿದರು. ಇಳಿಯುತ್ತಿದ್ದಂತೆ ಅವರ ದೇಹದ ಬಣ್ಣ ಸಂಪೂರ್ಣ ಬದಲಾಯಿತು. ಬಸ್ಸಿನಲ್ಲಿದ್ದವರು ಇವರೇನ!! ಎನ್ನುವಂತೆ ಬದಲಾಗಿದ್ದರು.  ಎಲ್ಲರು ಬಸ್ಸಿನಿಂದ ಇಳಿದರು. ಎಲ್ಲರ ಕಥೆಯು ಅಷ್ಟೆ. ಒಬ್ಬರಿಗೊಬ್ಬರ ಗುರುತು ಸಿಗದಂತಾಗಿತ್ತು. 

          ನಂತರ ಮಕ್ಕಳು ಸ್ವಯಂಸೇವಕರು ಎಲ್ಲರೂ ಒಟ್ಟಾಗಿ ಸೇರಿ ಬಣ್ಣಗಳ ಓಕುಳಿಯಲ್ಲಿ ಮಿಂದು, ಹಸಿರು ಕೆಂಪು ನೀಲಿ ಹಳದಿ ನೇರಳೆ ಮುಂತಾದ ಬಣ್ಣದಲಿ ರಾರಾಜಿಸುತ್ತ ನೀರನ್ನು ಎರೆಚುತ್ತ ಹೋಳಿಯ ಸಂಭ್ರಮಾಚರಣೆಯಲ್ಲಿ ತೊಡಗಿದರು.

          ಅನಂತ್ ಸರ್ ಸಹ ಮಕ್ಕಳ ಜೊತೆ ಮಕ್ಕಳಾಗಿ ಅವರ ಸಂತೋಷದಲ್ಲಿ ಭಾಗಿಯಾದರು.   ಮನಸಿನ ನಗು ಹೃದಯದ ಮೂಲಕ, ಹೃದಯದ ನಗು ಬಣ್ಣಗಳ ಮೂಲಕ ವ್ಯಕ್ತವಾಗುತ್ತಿತ್ತು.

                                         

     ಸದಾ ಕಡು ಬಡತನವನ್ನೇ ಕಂಡಿದ್ದ, ಕಪ್ಪು ಬಿಳುಪಲ್ಲೆ ಬೆಳೆದಿದ್ದ ಆ ಮಕ್ಕಳ ಬಾಳಿನಲ್ಲಿ ಅಂದು ಬಣ್ಣದ ದಿನ. ಅವರ ಮೊಗದಲ್ಲಿನ ನಗುವಿನಲ್ಲಿ ಸಪ್ತವರ್ಣ ಗಳು ವ್ಯಕ್ತವಾಗುತ್ತಿತ್ತು.     ಕತ್ತಲೆಯ ಕೂಪದಲ್ಲಿ ಬೆಳೆದಿದ್ದ ಅವರಿಗೆ  ಬಣ್ಣಗಳ ಬೆಳಕು ನವ ಚೈತನ್ಯವನ್ನು ನೀಡಿದವು.  ಇದೇ ಹೋಳಿಯ ನಿಜವಾದ ಅರ್ಥ.


        ಯಾವ ಶಾಲೆಯಲ್ಲಿ ಈ ರೀತಿ ಹೋಳಿ ಆಡಲು ಬಿಡುತ್ತಾರೆ ಹೇಳಿ. ಮಕ್ಕಳಿಗಾಗಿ ಶಾಲೆಯಂಬುದು ಅದಕ್ಕಾಗಿಯೇ. ಅಲ್ಲಿ ಬೇರೆಲ್ಲಕ್ಕಿಂತ ಮಕ್ಕಳ ಆನಂದವೇ ಮುಖ್ಯ. 

ದೇಹದ ಮೇಲಿದ್ದ ಬಣ್ಣಕ್ಕಿಂತ ಅವರ ಕಣ್ಣುಗಳಲ್ಲಿ ಕಾಣುತ್ತಿದ್ದ ಬಣ್ಣವು ಸ್ವಯಂಸೇವಕರಲ್ಲಿ ಸಾರ್ಥಕತೆಯ ಭಾವವನ್ನು ಮೂಡಿಸಿತು.   
        ಮಕ್ಕಳೆಲ್ಲರು ಅಂದು ಬಣ್ಣ ಬಣ್ಣದ ಹೂವುಗಳಾದರೆ, ಸ್ವಯಂಸೇವಕರು ಅವರನ್ನ ಆರಿಸಿ ಬಂದಿದ್ದ ದುಂಬಿಗಳಾಗಿದ್ದರು.  ಒಂದು ವ್ಯತ್ಯಾಸವೇನೆಂದರೆ. ದುಂಬಿಗಳು ಮಕರಂದವನ್ನು ಹೀರಲು ಬಂದಿರಲಿಲ್ಲ. ಮಕರಂದವನ್ನು ನೀಡಲು ಬಂದಿದ್ದವು.

                                         
           ಹೀಗೆ ಆಡುತ್ತ ಆಡುತ್ತ ಡ್ರಂನಲ್ಲಿದ್ದ ನೀರೆಲ್ಲವು ಖಾಲಿಯಾಗಿತ್ತು.ನಂತರ ಬರೀ ನೀರನ್ನು ತಂದು ಎರೆಚಾಡಲು ಶುರು ಮಾಡಿದರು.   ಹೀಗಿರುವಾಗ ಅದಾರಿಗೆ ಹೊಳೆಯಿತೊ ಗೊತ್ತಿಲ್ಲ. ಖಾಲಿಯಿದ್ದ ಡ್ರಂ ನೊಳಗೆ ಹುಡುಗಿಯರನ್ನು ಹಾಕಿ, ಅವರ ಮೇಲೆ ನೀರನ್ನು  ಸುರಿದು, ಅವರಿಗೆ ಹೊಡೆಯುವುದು. ನಂತರ ಡ್ರಂ ಮುಚ್ಚಳ ಮುಚ್ಚಿ ಡ್ರಂ ಗೆ ಹೊಡೆಯುವುದು, ಡ್ರಂ ಉರುಳಿಸುವುದು ಹೀಗೆ ಮಾಡುತ್ತ, ಮೋಜಿನಿಂದ ಆ ದಿನವನ್ನು ಕಳೆದರು. ಸ್ವಯಂಸೇವಕರಿಗಂತು ಅದು ಬಹಳ ಮಜಬೂತಾಗಿತ್ತು. ಆದರೇ ಬರೀ ಹುಡುಗಿಯರನ್ನೇ ಏಕೆ ಹಾಕಿದರು ಎಂಬುದು ಹುಡುಗಿಯರಿಗೆ ಪ್ರಶ್ನೆಯಾಗಿತ್ತು:).  
        ಎಲ್ಲರಿಗು ಜಾಮೂನ್ ಅನ್ನು ನೀಡಲಾಯಿತು. ಆ ನಂತರ ಸ್ಪೀಕರ್ ನಲ್ಲಿ ಹಾಡು ಹಾಕಿ ಕೆಲಕಾಲ ಕುಣಿದರು.  ಮಕ್ಕಳನ್ನು ಹೆಗಲ ಮೇಲೆ ಹೊತ್ತು ಫೋಟೊ ತೆಗೆಸಿಕೊಂಡರು, ಕೊನೆಗೆ ಕಲಿಯುವ ಮನೆಯ ಮುಂದೆ ಎಲ್ಲರೂ ಗುಂಪಾಗಿ ಸೇರಿ ಗುಂಪು ಫೋಟೊ ತೆಗೆಸಿಕೊಂಡರು. ಚಂದನ್ ಆ ದಿನದ ಛಾಯಾಗ್ರಾಹಕನಾಗಿದ್ದ.
        ಅಲ್ಲಿಗೆ ಆ ದಿನ ಪೂರ್ಣವಾಗಿತ್ತು. ಆದರೆ ಸಂಪೂರ್ಣವಾಗಿರಲಿಲ್ಲ.   ಏಕೆಂದರೆ ಅಂದು ಒಬ್ಬ ಸ್ವಯಂಸೇವಕಿ ಮೋನೀಷ್ ನ ಹುಟ್ಟುಹಬ್ಬ. ಅದನ್ನುಮಕ್ಕಳ ಜೊತೆ ಆಚರಿಸಲು ಎಲ್ಲರು ಕಾಯುತ್ತಿದ್ದರು.   ಆಕೆ ಇನ್ನು ಬಂದಿರಲಿಲ್ಲ. ಮೋನೀಷ್ ಬಂದ ತಕ್ಷಣ ಆಕೆಗು ಬಣ್ಣ ವನ್ನು ಹಚ್ಚಿ  ಅವಳ ಬಣ್ಣವನ್ನು ಬದಲಾಯಿಸಿದರು. ನಂತರ ವಾಹಿನಿಗೆ ಕರೆದೊಯ್ದುರು ಅಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಲಾಯಿತು. ಮಕ್ಕಳಿಗೆಲ್ಲರಿಗು ಕೇಕ್ ನೀಡಲಾಯಿತು.  ನಂತರ ಮತ್ತೊಂದು ಕೇಕ್ ಅನ್ನು ಆಕೆಯ ಕೈಯಲ್ಲಿ ಕತ್ತರಿಸಿ ಅದನ್ನು ವಾಲಂಟಿಯರ್ಸ್ ತೆಗೆದುಕೊಂಡರು. ತಂದಿದ್ದ ಮಂಚ್ ಚಾಕೊಲೇಟ್ ಅನ್ನು ಎಲ್ಲರಿಗೂ ನೀಡಲಾಯಿತು.
                                              
                                         


        ಅಂತು, ಬಣ್ಣ ಹಚ್ಚುವ ಮೂಲಕ ಶುರುವಾಗಿದ್ದ ದಿನ ಸಿಹಿಹಂಚುವ ಮೂಲಕ ಕೊನೆಗಂಡಿತು.  ಮಕ್ಕಳೆಲ್ಲರು ಬಸ್ಸಿನಲ್ಲಿ ಮನೆಗೆ ತೆರಳಿದರು. ಅವರ ಜೀವನದಲ್ಲಿ ಅದೊಂದು ಬಣ್ಣದ ದಿನ. ಸ್ವಯಂಸೇವಕರು ಸಹ ಅಲ್ಲಿಂದ ತೆರಳಿದರು. 
           ಪಶ್ಚಿಮದಲ್ಲಿ ಕಿತ್ತಲೆ ಸೂರ್ಯನು ಎಲ್ಲವನ್ನು ನೋಡಿ ನಗುತ್ತಿದ್ದ. ಏಕೆಂದರೇ ಎಲ್ಲ ಬಣ್ಣಗಳು ಕಾಣುವುದು ಆತನ ಬೆಳಕಲ್ಲೇ ತಾನೇ. 
           ಅದೇ ರೀತಿ ಪ್ರತಿಯೊಬ್ಬ ಮಗುವು ಸಹ ಸೂರ್ಯನಾಗಿ ಬೆಳಕನ್ನು ನೀಡುವಂತಾಗಲಿ ಎಂದು ಆಶಿಸೋಣ. ಆಗ ಜಗತ್ತು ಎಂದೆಂದೂ ವರ್ಣಮಯವಾಗಿರುತ್ತದೆ.      

                           

         
                                     


1 comment: